THIS SITE MOVE TO www.mahitilok.in

ಡಾ.ಬಾಬು ಜಗಜೀವನ ರಾಮ್ ಜಯಂತಿ

12345
123456

*ಬಾಬು ಜಗಜೀವನ ರಾಮ್*

ಬಾಬು ಜಗಜೀವನ ರಾಮ್ (೫ ಏಪ್ರಿಲ್ ೧೯೦೮ - ೬ ಜುಲೈ ೧೯೮೬) "ಬಾಬೂಜಿ" ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು.

🌹ಭಾರತದ ಉಪ ಪ್ರಧಾನ ಮಂತ್ರಿ

ಅಧಿಕಾರ ಅವಧಿ

೨೪ ಮಾರ್ಚಿ ೧೯೭೭ – ೨೮ ಜುಲೈ ೧೯೭೯

Serving with ಚರಣ್ ಸಿಂಗ್ಪ್ರಧಾನ ಮಂತ್ರಿಮೊರಾರ್ಜಿ ದೇಸಾಯಿಪೂರ್ವಾಧಿಕಾರಿಮೊರಾರ್ಜಿ ದೇಸಾಯಿಉತ್ತರಾಧಿಕಾರಿಯಶವಂತರಾವ್ ಚವಾಣ್

🌹ರಕ್ಷಣಾ ಮಂತ್ರಿ

ಅಧಿಕಾರ ಅವಧಿ

24 March 1977 – 1 July 1978ಪ್ರಧಾನ ಮಂತ್ರಿಮೊರಾರ್ಜಿ ದೇಸಾಯಿಪೂರ್ವಾಧಿಕಾರಿSardar Swaran Singhಉತ್ತರಾಧಿಕಾರಿSardar Swaran Singhಅಧಿಕಾರ ಅವಧಿ

27 June 1970 – 10 October 1974ಪ್ರಧಾನ ಮಂತ್ರಿIndira Gandhiಪೂರ್ವಾಧಿಕಾರಿBansi Lalಉತ್ತರಾಧಿಕಾರಿChidambaram Subramaniamವೈಯುಕ್ತಿಕ ಮಾಹಿತಿಜನನ5 ಏಪ್ರಿಲ್ 1908

Chandwa, Bhojpur District, Bihar, British Raj(now India)ಮರಣ6 ಜುಲೈ 1986 (ವಯಸ್ಸು 78)ರಾಜಕೀಯ ಪಕ್ಷIndian National Congress-Jagjivan(1981–1986)ಇತರೆ ರಾಜಕೀಯ

ಸಂಲಗ್ನತೆಗಳುIndian National Congress (Before 1977)

Congress for Democracy(1977)

Janata Party (1977–1981)ಮಕ್ಕಳುSuresh

Meiraಅಭ್ಯಸಿಸಿದ ವಿದ್ಯಾಪೀಠBanaras Hindu University

University of Calcutta


🌹 *ಬಾಬು ಜಗಜೀವನ್ ರಾಂ ಯಾರು?*

ಲೇಖಕರು - ಶ್ರೀ ಜಿ ಪಿ ಬಸವರಾಜು


ಸ್ವತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಭಾರತದಲ್ಲಿ, ಹಲ ಬಗೆಯ ಸೆಣಸಾಟದಲ್ಲಿಯೇ ತಮ್ಮನ್ನು ಕಟ್ಟಿಕೊಂಡ, ಬೆಳಗಿಕೊಂಡ ಕೆಲವೇ ಕೆಲವು ದಲಿತ ನಾಯಕರಲ್ಲಿ ಬಾಬು ಜಗಜೀವನ ರಾಂ ಮುಖ್ಯರು. ರಾಂ ಬದುಕಿನ ಪುಟಗಳಲ್ಲಿ ಹೆಜ್ಜೆಹೆಜ್ಜೆಗೂ ಅವರು ಸೆಣಸಿದ ಕಥನವೇ ಕಾಣಿಸುತ್ತದೆ. ಬಾಬೂಜಿ ತೀರ ಕಡು ಬಡತನದಲ್ಲಿ ಹುಟ್ಟಲಿಲ್ಲ. ಅವರು ಹುಟ್ಟುವ ಸಂದರ್ಭದಲ್ಲಿ ಅವರ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇತ್ತು. ಅವರ ತಂದೆ ಸೋಭಿರಾಂ ಬ್ರಿಟಿಷರ ಭಾರತೀಯ ಸೇನೆಯ ಜೊತೆಯಲ್ಲಿದ್ದವರು. ತಮ್ಮ ಸೇವೆಯ ಭಾಗವಾಗಿ ಪೆಶಾವರ್ಗೂ ಹೋದವರು. ನಂತರ ಅವರು ತಮ್ಮ ಹುದ್ದೆಗೆ ರಾಜೀನಾಮೆಯನ್ನು ಕೊಟ್ಟು ಬಿಹಾರಕ್ಕೆ ಬಂದು ಅರಾ ಪಟ್ಟಣದ ಸಮೀಪದ ಚಾಂದ್ವಾ ಗ್ರಾಮದಲ್ಲಿ ನೆಲಸಿದರು. 

ಭೂಮಿಯನ್ನೂ ಕೊಂಡು ಕೃಷಿಯನ್ನು ಆರಂಭಿಸಿದವರು ಸೋಭಿರಾಂ. ಅವರು ಶಿವನಾರಾಯಣ್ ಎನ್ನುವ ಉಪಜಾತಿಯಲ್ಲಿ ಮಹಾಂತರೂ ಆಗಿದ್ದರು. ಈ ಹಿನ್ನೆಲೆಯಿದ್ದ ಬಾಲಕ ಜಗಜೀವನ ರಾಂ ಸಂಕಷ್ಟಕ್ಕೊಳಗಾಗಬೇಕಾಗಿರಲಿಲ್ಲ. ಆದರೆ ಹಿಂದೂ ಸಮಾಜದ ಜಾತಿಪದ್ಧತಿ ಎನ್ನುವ ಕ್ರೂರ ವ್ಯವಸ್ಥೆ ದಲಿತರನ್ನು ನೆಮ್ಮದಿಯಿಂದಿರಲು ಬಿಡುವುದೇ ಇಲ್ಲ. ಅದು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ದಲಿತನನ್ನೂ ಅವಮಾನದ ಕೂಪಕ್ಕೆ ತಳ್ಳುತ್ತಲೇ ಇರುತ್ತದೆ. ಛಲವಂತ ಮಾತ್ರ ಇಂಥ ಕೂಪದಿಂದ ಮೇಲೆದ್ದು ಬಂದು ಬೆಳಕು ಕಾಣುತ್ತಾನೆ. ಹೀಗೆ ಅಪಮಾನಗಳನ್ನು ಎದುರಿಸುತ್ತ, ದಲಿತರನ್ನು ಸಂಘಟಿಸುತ್ತ, ಮನುಷ್ಯನ ಘನತೆಗೆ ಹೋರಾಡುತ್ತ, ಸಮಾನ ಅವಕಾಶಗಳಿಗಾಗಿ ಹಂಬಲಿಸುತ್ತ ಭಾರತದ ದಲಿತರ ಅಖಂಡ ಆತ್ಮವಿಶ್ವಾಸವಾಗಿ ನಿಂತವರು ಬಾಬು ಜಗಜೀವನ ರಾಂ.


ಈ ಜಾತಿವ್ಯವಸ್ಥೆ ಎನ್ನುವುದು ಬ್ರಿಟಿಷರ ಭಾರತದಲ್ಲೂ ಇಷ್ಟೇ ಕ್ರೂರವಾಗಿತ್ತು. 1914ರಲ್ಲಿ ಶಾಲೆಗೆ ಹೋಗಲು ಆರಂಭಿಸಿದ ಜಗಜೀವನ ರಾಂ (ಹುಟ್ಟಿದ್ದು 5 ಏಪ್ರಿಲ್ 1908) ಆ ದಿನಗಳಲ್ಲೇ ತಮ್ಮ ತಂದೆಯ ಸಾವನ್ನೂ ನೋಡಬೇಕಾಯಿತು. ಆದರೆ ತಾಯಿ ವಾಸಂತಿ ದೇವಿ ಧೃತಿಗೆಡಲಿಲ್ಲ. ಮಗನ ವಿದ್ಯಾಭ್ಯಾಸವನ್ನು ಬೆಂಬಲಿಸಿದರು. ಬಾಲಕ ರಾಂಗೆ ನಮ್ಮ ಜಾತಿ ವ್ಯವಸ್ಥೆಯ ನಿಜವಾದ ಮುಖ ಅರ್ಥವಾದದ್ದು ಅವರು ಆರಾದಲ್ಲಿನ ಮಾಧ್ಯಮಿಕ ಶಾಲೆಯನ್ನು ಪ್ರವೇಶಿಸಿದಾಗ. ಈ ಶಾಲೆಯಲ್ಲಿ ಕುಡಿಯುವ ನೀರಿಗಾಗಿ ಮಾಡಿದ್ದ ವ್ಯವಸ್ಥೆ ವಿಚಿತ್ರವಾಗಿತ್ತು. ಎರಡು ಮಡಿಕೆಗಳಲ್ಲಿ ಅಲ್ಲಿ ನೀರನ್ನು ಇಡಲಾಗುತ್ತಿತ್ತು. ಒಂದು ಮಡಿಕೆಯ ನೀರು ಹಿಂದೂ ಮಕ್ಕಳಿಗೆ; ಮತ್ತೊಂದು ಮುಸ್ಲಿಂ ಮಕ್ಕಳಿಗೆ. ರಾಂ ಹಿಂದೂ ಮಡಿಕೆಯ ನೀರನ್ನು ಕುಡಿದರು. 


ಇದೊಂದು ಘೋರ ಅಪರಾಧವಾಯಿತು. ದೂರು ಪ್ರಿನ್ಸಿಪಾಲರಿಗೆ ಹೋಯಿತು. ಪ್ರಿನ್ಸಿಪಾಲರು ಮೂರನೆಯ ಮಡಿಕೆಯೊಂದನ್ನು ಇಡಿಸಿ, ಅದು ಅಸ್ಪೃಶ್ಯ ಮಕ್ಕಳಿಗೆಂದು ಹೇಳಿದರು. ಮೊದಲ ಬಾರಿಗೆ ಅಸ್ಪೃಶ್ಯತೆಯ ಅಪಮಾನ ರಾಂ ಅವರನ್ನು ತಟ್ಟಿತು. ಇದರಿಂದ ಸಿಟ್ಟಿಗೆದ್ದ ಬಾಲಕ ರಾಂ ಎರಡು ಬಾರಿ ಈ ಮಡಿಕೆಯನ್ನು ಒಡೆದು ಹಾಕಿ ತಮ್ಮ ಕೋಪವನ್ನು ಪ್ರದರ್ಶಿಸಿದರು. ಪ್ರಿನ್ಸಿಪಾಲರೇನೋ ಈ ಮೂರನೆಯ ಮಡಿಕೆಯನ್ನು ತೆಗೆಸಿದರು. ಆದರೆ ಈ ಜಾತಿಪದ್ಧತಿಯ ಅಪಮಾನದ ಗಾಯ ಬಾಲಕ ರಾಂ ಅವರ ಎದೆಯಾಳಕ್ಕಿಳಿಯಿತು. ಮುಂದೆ ತಮ್ಮ ಜೀವನದುದ್ದಕ್ಕೂ ರಾಂ ನಡೆಸಿದ ಎಲ್ಲ ಚಟುವಟಿಕೆಗಳ ಹಿಂದೆ ಈ ನೋವು ಉಳಿದುಕೊಂಡೇ ಇತ್ತು. ಇಂಥ ಜಾತಿ ಅಪಮಾನದಿಂದ ದಲಿತರನ್ನು ಪಾರುಮಾಡುವ ಆಶಯವೇ ರಾಂ ಚಟುವಟಿಕೆಗಳ ಪ್ರಧಾನ ಆಶಯವಾಗಿಯೂ ಮಾರ್ಪಟ್ಟಿತು. ಮನುಷ್ಯನ ಘನತೆಗೆ ಮತ್ತು ಸಮಾನತೆಗೆ ಅವರು ನಿರಂತರವಾಗಿ ಒತ್ತಾಯಿಸುತ್ತಲೇ ಇದ್ದದ್ದು ಈ ಕಾರಣಕ್ಕಾಗಿಯೇ.


ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಂಥ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾಥರ್ಿಯಾಗಿದ್ದಾಗಲೂ ರಾಂ ಈ ಬಗೆಯ ಅವಮಾನಕ್ಕೆ ಈಡಾಗುತ್ತಾರೆಂದರೆ ಅದು ನಮ್ಮ ವರ್ಣವ್ಯವಸ್ಥೆಯ ಕ್ರೂರ ಮುಖವನ್ನು ಮಾತ್ರ ತೋರಿಸಬಲ್ಲದು. ವಿದ್ಯಾರ್ಥಿಯಾಗಿದ್ದ ರಾಂ ಅವರಿಗೆ ಕ್ಷೌರ ಮಾಡಲು ನಿರಾಕರಿಸುವ ಮೂಲಕ ಈ ಸಮಾಜ ಅವರಿಗೆ ಅಪಮಾನವನ್ನು ಮಾಡುತ್ತದೆ. ವಿದ್ಯಾರ್ಥಿ ನಿಲಯದಲ್ಲಿ ರಾಮ್ ಅವರಿಗೆ ಊಟ ಬಡಿಸುವುದಕ್ಕೂ ಒಪ್ಪದೆ ಎಳೆಯ ಮನಸ್ಸಿಗೆ ಮತ್ತೆ ಅಪಮಾನದ ಬರೆಯನ್ನು ಎಳೆಯಲಾಗುತ್ತದೆ. ಈ ದೇಶದ ದಲಿತರಿಗೆ ಇದು ದೊಡ್ಡ ಸಂಗತಿಯೇ ಅಲ್ಲ. ಈಗಲೂ ಇಂಥ ನೂರಾರು ಅಪಮಾನಗಳನ್ನು ನುಂಗಿಕೊಳ್ಳುತ್ತಲೇ ನಂಜುಂಡರಾಗಿರುವ ದಲಿತರು ತಮ್ಮ ಆತ್ಮಬಲವನ್ನು ಕಳೆದುಕೊಳ್ಳದೆ ಬದುಕುತ್ತಿದ್ದಾರೆ. ಜಗಜೀವನರಾಂ ಆ ಕಾಲದಲ್ಲಿ ಆತ್ಮವಿಶ್ವಾಸವನ್ನು ಉಳಿಸಿಕೊಂಡು ಮೇಲೆದ್ದು ಬಂದದ್ದು ಮಹಾನ್ ಬದುಕಿನ ಪುಟಗಳನ್ನೇ ತೆರೆದಿಡುತ್ತದೆ.


ಹಾಗೆ ನೋಡಿದರೆ ಬನಾರಸ್ ಹಿಂದೂ ವಿದ್ಯಾಲಯದಲ್ಲಿ ರಾಂ ಅವರಿಗೆ ಜಾಗ ದೊರೆತದ್ದು ಯಾರ ಕರುಣೆ, ಸಹಾನುಭೂತಿಯಿಂದಲೂ ಅಲ್ಲ. ಅವರ ಬುದ್ಧಿಮತ್ತೆ, ದಿಟ್ಟತನ, ಪ್ರತಿಭೆಗಳ ಬಲದಿಂದ. ಮದನ್ ಮೋಹನ ಮಾಲವೀಯ ಅವರು ರಾಂ ಓದುತ್ತಿದ್ದ ಶಾಲೆಗೆ ಬಂದ ಸಂದರ್ಭದಲ್ಲಿ ರಾಂಗೆ ಒಂದು ಅಗ್ನಿಪರೀಕ್ಷೆ ಎದುರಾಗುತ್ತದೆ. ಸ್ವಾಗತ ಭಾಷಣವನ್ನು ಮಾಡುವ ಪುಟ್ಟ ಕೆಲಸವಾದರೂ ಅದು ಒಬ್ಬ ವಿದ್ಯಾರ್ಥಿಯ, ಅದರಲ್ಲೂ ದಲಿತ ವಿದ್ಯಾರ್ಥಿಯ ಪಾಲಿಗೆ ಅಗ್ನಿಪರೀಕ್ಷೆಯೇ. ರಾಂ ಹಿಂಜರಿಯುವುದಿಲ್ಲ. ಧೈರ್ಯವಾಗಿ ಇದನ್ನು ಎದುರಿಸುತ್ತಾರೆ. ಮಾಳವೀಯ ಈ ವಿದ್ಯಾರ್ಥಿಯ ಪ್ರತಿಭೆ, ದಿಟ್ಟತನಗಳನ್ನು ಮೆಚ್ಚುತ್ತಾರೆ. ಬನಾರಸ್ ಹಿಂದೂ ವಿದ್ಯಾಲಯಕ್ಕೆ ಇವರನ್ನು ಆಹ್ವಾನಿಸುತ್ತಾರೆ.


ರಾಂ ಮುಂದೆ ಇನ್ನೊಂದು ಆಹ್ವಾನವೂ ಇರುತ್ತದೆ. ಅದು ಕ್ರಿಶ್ಚಿಯನ್ ಮಿಷನರಿಗಳು ಕೊಟ್ಟ ಆಹ್ವಾನ. ಇಲ್ಲಿಯ ಶಿಕ್ಷಣ, ಮುಂದೆ ಅಮೆರಿಕದಲ್ಲಿ ಶಿಕ್ಷಣ, ಎಲ್ಲ ಹೊಣೆಗಾರಿಕೆಯೂ ನಮ್ಮದೇ ಎಂದು ಮಿಷನರಿಗಳು ಹೇಳಿ ಆಹ್ವಾನ ನೀಡುತ್ತಾರೆ. ರಾಂ ಅವರ ತಾಯಿ ಈ ಆಹ್ವಾನವನ್ನು ನಿರಾಕರಿಸುತ್ತಾರೆ. ನನ್ನ ಮಗ ಧರ್ಮಾಂತರಗೊಂಡು ಶಿಕ್ಷಣ ಪಡೆಯುವುದು ಬೇಡ ಎಂಬುದು ಅವರ ನಿರಾಕರಣೆಯ ಹಿಂದಿನ ಕಾರಣ. ಹೀಗಾಗಿ ರಾಂ ಬನಾರಸ್ಗೆ ನಡೆಯುತ್ತಾರೆ. ತಮ್ಮ ಪ್ರತಿಭೆಯ ಬಲದಿಂದಲೇ ಅವರು ಬಿರ್ಲಾ ಸ್ಕಾಲರ್ಷಿಪ್ಪನ್ನೂ ಪಡೆದುಕೊಳ್ಳುತ್ತಾರೆ.


ರಾಂ ಪ್ರತಿಭೆಯ ಜೊತೆಗೆ ಸ್ಪಷ್ಟ ಗ್ರಹಿಕೆ, ಒಳನೋಟ, ತತ್ವಬದ್ಧತೆ, ನಿಷ್ಠೆಗಳನ್ನೂ ಉಳ್ಳವರು. ತಾವು ಬಂದ ಸಮುದಾಯ, ಅದರ ಒಳಗುದಿ, ನೋವು, ಅಪಮಾನ, ವರ್ಣ ವ್ಯವಸ್ಥೆ ಸೃಷ್ಟಿಸಿದ ಕಠೋರ ಸನ್ನಿವೇಶ ಎಲ್ಲವನ್ನೂ ಅರಿಯುವ ಪ್ರಬುದ್ಧ ಚಿಂತನೆಯೂ ಅವರಲ್ಲಿತ್ತು. ಹೀಗಾಗಿಯೇ ಅವರು ಅವಮಾನಗಳನ್ನು, ಅದರ ಪೂರ್ವಾಪರಗಳನ್ನು, ಒಟ್ಟು ವ್ಯವಸ್ಥೆಯ ಮನೋಧರ್ಮವನ್ನು ಅರಿಯಬಲ್ಲವರಾಗಿದ್ದರು. ಅಪಮಾನಗಳನ್ನು ದಾಟುವುದು ಆ ಹೊತ್ತಿನ ಕ್ರಿಯೆ ಮಾತ್ರವಲ್ಲ ಮತ್ತು ವೈಯಕ್ತಿಕ ಸಾಧನೆಯೂ ಅಲ್ಲ ಎಂದು ತಿಳಿದಿದ್ದ ರಾಂ ತನ್ನ ಜನರ ಅಪಮಾನವನ್ನು ಕಾಲಾಂತರದಲ್ಲಿ ಶಾಶ್ವತವಾಗಿ ಪರಿಹರಿಸುವುದು ಹೇಗೆ ಎಂಬ ದಿಕ್ಕಿನಲ್ಲಿ ಚಿಂತಿಸಿದರು; ಕ್ರಿಯಾಶೀಲರಾದರು. ಅದು ವೈಯಕ್ತಕ ಹೋರಾಟವನ್ನಾಗಿ ಮಾಡದೆ, ತುಳಿತಕ್ಕೊಳಗಾದ ಸಮುದಾಯದ ಹೋರಾಟವನ್ನಾಗಿ ಮಾಡಿದರು. ತಾವು ಈ ಹೋರಾಟದ ಮುಂಚೂಣಿಯಲ್ಲಿ ನಿಂತರು.


ರಾಂ ಅವರಿಗಿದ್ದ ಕನಸುಗಳಲ್ಲಿ ಮುಖ್ಯವಾದದ್ದು ತಾವು ಉನ್ನತ ಮಟ್ಟದ ವಿಜ್ಞಾನಿಯಾಗಬೇಕೆಂಬುದು. ಆದರೆ ಭಾರತದ ಚರಿತ್ರೆ ರಾಂ ಅವರ ಚಲನೆಯ ದಿಕ್ಕನ್ನು ಬೇರೆಡೆಗೆ ತಿರುಗಿಸಿತು. ತನ್ನ ಸಮುದಾಯದ ನೋವುಗಳಿಗೆ ಸ್ಪಂದಿಸಬಲ್ಲ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದ ರಾಂ ವಿಜ್ಞಾನಿಯಾಗುವುದಕ್ಕಿಂತ ಮುಖ್ಯವಾದ ಪಾತ್ರವೊಂದನ್ನು ನಿರ್ವಹಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ರಾಂ ತಮ್ಮ ದಿಕ್ಕನ್ನು ಬದಲಿಸಿದರು. ಸಮಾಜವಿಜ್ಞಾನ, ರಾಜಕೀಯ, ಹೋರಾಟ, ತನ್ನಂಥ ಅಪಮಾನಕ್ಕೊಳಗಾದವರ ಸಂಘಟನೆ, ನ್ಯಾಯಬದ್ಧ ಹಕ್ಕುಗಳಿಗೆ ಮತ್ತು ಸಮಾನತೆಗಾಗಿ ಹೋರಾಟ ಇವೇ ರಾಂ ಅವರ ಬದುಕಿನ ನಿರಂತರ ಆಸಕ್ತಿಗಳಾಗಿ ಅವರನ್ನು ಮುನ್ನಡೆಸುತ್ತವೆ. ಸ್ವಾತಂತ್ರ್ಯಪೂರ್ವದ ಭಾರತದ ಚರಿತ್ರೆಯನ್ನು ಸೂಕ್ಷ್ಮವಾಗಿ ಮತ್ತು ಪೂರ್ವಗ್ರಹಗಳಿಲ್ಲದೆ ಗಮನಿಸುವವರಿಗೆ ರಾಂ ಅವರ ವ್ಯಕ್ತಿತ್ವ ಸ್ಪಷ್ಟವಾಗಿ ಕಾಣಿಸುತ್ತದೆ. ಅವರೊಬ್ಬ ಅಸಮಾನ ಹೋರಾಟಗಾರ; ಸಮುದಾಯದ ಮಹಾನ್ ಕನಸುಗಾರ.


ಬನಾರಸ್ನಲ್ಲಿದ್ದ ಸಂದರ್ಭದಲ್ಲಿಯೇ ರಾಂ ದಲಿತ ವಿದ್ಯಾರ್ಥಿಗಳನ್ನು ಸಂಘಟಿಸಿ ಸಾಮಾಜಿಕ ತಾರತಮ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ವಿದ್ಯಾರ್ಥಿ ದೆಸೆಯಿಂದಲೇ ತಾವೊಬ್ಬ ದಲಿತರ ಸಮರ್ಥ ನಾಯಕ ಎಂಬುದನ್ನೂ ತೋರಿಸಿಕೊಡುತ್ತಾರೆ.


ಇಂಟರ್ಮೀಡಿಯಟ್ ನಂತರ ಬನಾರಸನ್ನು ತೊರೆಯುವ ರಾಂ ಪದವಿ ಶಿಕ್ಷಣಕ್ಕಾಗಿ ಕಲ್ಕತ್ತಕ್ಕೆ ಬರುತ್ತಾರೆ. ಕಲ್ಕತ್ತ ರಾಂ ಅವರ ವ್ಯಕ್ತಿತ್ವವನ್ನು ಇನ್ನಷ್ಟು ಹಿಗ್ಗಿಸುತ್ತದೆ. ಕಲ್ಕತ್ತದಲ್ಲಿ ರಾಂ ಜಾತಿ ವ್ಯವಸ್ಥೆಯ ದುಷ್ಟಮುಖದ ವಿರುದ್ಧ ಸಮ್ಮೇಳನಗಳನ್ನು ನಡೆಸುತ್ತಾರೆ. ನಿಧಾನಕ್ಕೆ ಮಜ್ದೂರ್ ಸಂಘಟನೆಯಲ್ಲಿ ಆಸಕ್ತಿ ವಹಿಸುವ ರಾಂ ತಮ್ಮ ಬುದ್ಧಿಮತ್ತೆ ಮತ್ತು ಸಂಘಟನೆಯ ಚಾತುರ್ಯದಿಂದ ವೆಲ್ಲಿಂಗ್ಟನ್ ಚೌಕದಲ್ಲಿ 50,000 ಕಾರ್ಮಿಕರನ್ನು ಸೇರಿಸಿ ಬೃಹತ್ ಮಜ್ದೂರ್ ರ್ಯಾಲಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಇದು ಎಲ್ಲರೂ ರಾಂನತ್ತ ನೋಡುವಂತೆ ಮಾಡುತ್ತದೆ. ನೇತಾಜಿ ಸುಭಾಷ್ಚಂದ್ರ ಭೋಸ್ ಅವರ ಗಮನಕ್ಕೂ ರಾಂ ಅವರ ಈ ಸಂಘಟನಾ ಸಾಮಥ್ರ್ಯ ಬರುತ್ತದೆ.


ಇಲ್ಲಿಂದ ಮುಂದೆ ರಾಂ ದಲಿತ ನಾಯಕರೇ. ಅವರ ಕಾರ್ಯಕ್ಷೇತ್ರ ಬಿಹಾರವಾಗುತ್ತದೆ. ಗಾಂಧೀಜಿಯವರು ಆರಂಭಿಸಿದ್ದ ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ರಾಂ ಪಾಲ್ಗೊಳ್ಳುತ್ತಾರೆ. ಬಿಹಾರದ ಭೂಕಂಪ (1934)ದಲ್ಲಿ ನೊಂದವರಿಗೆ ನೆರವಾಗುವ ಕಾರ್ಯದಲ್ಲೂ ರಾಂ ಕ್ರಿಯಾಶೀಲರಾಗುತ್ತಾರೆ. ದಲಿತರ ಸಮಾನತೆಗಾಗಿ ಹೋರಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ‘ ಅಖಿಲ ಭಾರತ ದಮನಿತ ವರ್ಗಗಳ ಒಕ್ಕೂಟ’ವನ್ನು ಸ್ಥಾಪಿಸುವಲ್ಲಿ (1935) ರಾಂ ವಹಿಸಿದ ಪಾತ್ರ ಬಹಳ ಮಹತ್ವದ್ದಾಗಿತ್ತು.


ಭಾರತೀಯರ ಸ್ವಾತಂತ್ರ್ಯ ಹೋರಾಟದಲ್ಲಿಯೂ ರಾಂ ಸ್ಪಷ್ಟ ನಿಲುವನ್ನು ತಳೆಯುವುದು ಆ ಕಾಲದ ಒತ್ತಡವಾಗಿತ್ತು. ಆಗ ರಾಂ ಮುಂದೆ ಎರಡು ಆಯ್ಕೆಗಳಿರುತ್ತವೆ: ಒಂದು ಬ್ರಿಟಿಷರಿಗೆ ನಿಷ್ಠರಾದ ಗುಂಪಿನಲ್ಲಿದ್ದುಕೊಂಡು ಕ್ರಿಯಾಶೀಲರಾಗಿರುವುದು; ಇನ್ನೊಂದು ಆಯ್ಕೆ ಬ್ರಿಟಿಷರ ವಿರುದ್ಧವಿದ್ದುಕೊಂಡು ರಾಷ್ಟ್ರೀಯರಾಗಿ ಕ್ರಿಯಾಶೀಲರಾಗಿರುವುದು. ರಾಂ ಎರಡನೆಯ ಆಯ್ಕೆ ಮಾಡುತ್ತಾರೆ; ಕಾಂಗ್ರೆಸ್ಸನ್ನು ಸೇರುತ್ತಾರೆ(1935). ರಾಷ್ಟ್ರದ ಬಗ್ಗೆ ರಾಂ ಅವರಿಗಿದ್ದ ಸ್ಪಷ್ಟ ನಿಲುವು ಮತ್ತು ಅಖಂಡ ನಿಷ್ಠೆ ಕಾರಣವಾಗಿ ಅವರು ಜೈಲುವಾಸವನ್ನು ಅನುಭವಿಸಬೇಕಾಯಿತು. ಎರಡನೇ ಜಾಗತಿಕ ಯುದ್ಧದಲ್ಲಿ ಭಾರತ ಪಾಲ್ಗೊಳ್ಳುವುದನ್ನು ಅವರ ಬಲವಾಗಿ ಖಂಡಿಸಿದರು. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಂತೂ ರಾಂ ತುಂಬ ಕ್ರಿಯಾಶೀಲರಾಗಿ ಭಾಗವಹಿಸಿದರು. ಜೈಲು ಶಿಕ್ಷೆಯನ್ನು ಇವರು ಲೆಕ್ಕಿಸಲೇ ಇಲ್ಲ.


ಕಾಂಗ್ರೆಸ್ನಲ್ಲಿ ರಾಂ ಅವರದೊಂದು ಸಮರ್ಥ ಧ್ವನಿ; ದಮನಿತರ ಪರವಾಗಿ, ಅವರ ಧ್ವನಿಯಾಗಿ, ಅವರ ಹಕ್ಕುಗಳನ್ನು ಪ್ರತಿಪಾದಿಸುವ ಸಮರ್ಥ ವಕ್ತಾರರಾಗಿ ರಾಂ ಕಾಂಗ್ರೆಸ್ಸಿನಲ್ಲಿ ಪ್ರತಿಷ್ಠಿತ ಸ್ಥಾನ ಪಡೆದುಕೊಂಡರು. ಅಂಬೇಡ್ಕರ್ ಅವರಿಗೆ ಪರ್ಯಾಯವಾಗಿ ಮತ್ತೊಬ್ಬ ದಲಿತ ನಾಯಕನನ್ನು ರೂಪಿಸುವ ಕಾರ್ಯತಂತ್ರವಾಗಿಯೂ ಕಾಂಗ್ರೆಸ್ ರಾಂ ಅವರನ್ನು ಬಿಂಬಿಸಲು ನೋಡುತ್ತದೆ. ಕಾಂಗ್ರೆಸ್ಸಿನ ತಂತ್ರಗಾರಿಕೆ ಏನೇ ಇದ್ದರೂ, ರಾಂ ಅವರ ಪಾತ್ರ ಬದಲಾಗುವುದಿಲ್ಲ; ಅವರ ದಲಿತ ನಿಷ್ಠೆ ಮತ್ತು ಹೋರಾಟ ಪ್ರಶ್ನಾತೀತ. 1935ರಲ್ಲಿ ನಡೆದ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಗೊತ್ತುವಳಿಯೊಂದನ್ನು ಮಂಡಿಸುವುದರ ಮೂಲಕ ಒತ್ತಾಯಿಸಿದ್ದು: ದಲಿತರಿಗೆ ದೇವಾಲಯಗಳಲ್ಲಿ ಪ್ರವೇಶ ಮತ್ತು ಕುಡಿಯುವ ನೀರಿನ ಬಾವಿಯನ್ನು ಬಳಸುವಲ್ಲಿ ಎಲ್ಲರಿಗಿರುವಂತೆಯೇ ದಲಿತರಿಗೂ ಮುಕ್ತ ಅವಕಾಶವಿರಬೇಕು. ದೇಶದ ಸ್ವಾತಂತ್ರಕ್ಕಾಗಿ ಹೋರಾಟ, ದಲಿತರ ಹಕ್ಕುಗಳಿಗಾಗಿ ಸೆಣಸಾಟ, ಸಮಾಜ ಸುಧಾರಣೆಗಾಗಿ ಚಿಂತನೆ, ಮನುಷ್ಯರ ಸಮಾನತೆ ಮತ್ತು ಘನತೆಗಾಗಿ ನಿರಂತರ ಸಮರ-ಇವು ರಾಂ ಅವರ ಬದುಕಿನ ಸೂತ್ರಗಳಾದವು.


1937ರಲ್ಲಿ ಬಿಹಾರ ವಿಧಾನ ಸಭೆಗೆ ರಾಂ ಆಯ್ಕೆಯಾಗುವುದಕ್ಕಿಂತ ಮುನ್ನವೇ ಅವರ ರಾಜಕೀಯ ಜೀವನ ಆರಂಭವಾಗಿತ್ತು. ರಾಜಕೀಯವನ್ನೇ ತಮ್ಮ ಹೋರಾಟದ ಕಣವಾಗಿ ಮಾಡಿಕೊಂಡಿದ್ದ ರಾಂ ಸುಮಾರು ಅರ್ಧ ಶತಮಾನದಷ್ಟು ಸುದೀರ್ಘ ಕಾಲ ಈ ಕಣದಲ್ಲಿ ಕ್ರಿಯಾಶೀಲವಾಗಿದ್ದರು. ಇಲ್ಲಿಯೇ ಅರ್ಥಪೂರ್ಣವಾಗಿ ದುಡಿದರು; ತನ್ನ ಸಮುದಾಯವನ್ನು ಮೇಲೆತ್ತಲು ಸೆಣಸಿದರು. ತಮ್ಮ ರಾಜಕೀಯ ಜೀವನದಲ್ಲಿ ರಾಂ ಎಂದೂ ಕಳಾಹೀನರಾಗಲೇ ಇಲ್ಲ. 1946ರಲ್ಲಿ ಜವಹರ ಲಾಲ್ ಅವರ ನೇತೃತ್ವದಲ್ಲಿ ಪ್ರಥಮ ಹಂಗಾಮಿ ಸರ್ಕಾರ ರಚನೆಯಾದಾಗ ರಾಂ ಅವರಿಗೆ ಸಂಪುಟದಲ್ಲಿ ಪ್ರಮುಖ ಸ್ಥಾನ. ಆಗವರು ನೆಹರೂ ಸಚಿವ ಸಂಪುಟದ ಅತ್ಯಂತ ಕಿರಿಯ ಮಂತ್ರಿ. ಅವರ ಸಂಘಟನಾ ಸಾಮಥ್ರ್ಯ, ಹೋರಾಟದ ಹಿನ್ನೆಲೆ ಮತ್ತು ತತ್ವನಿಷ್ಠೆಯನ್ನು ಬಲ್ಲ ಪ್ರಧಾನಿ ನೆಹರೂ ಸಹಜವಾಗಿಯೇ ರಾಂ ಅವರಿಗೆ ಕಾರ್ಮಿಕ ಖಾತೆ ಕೊಟ್ಟರು. ಮುಂದಿನ ರಾಂ ಪಯಣದಲ್ಲಿ ಅವರೆಂದೂ ಹಿಂದಿರುಗಿ ನೋಡಿದ್ದೇ ಇಲ್ಲ. ತಮ್ಮ ಸಾಮಥ್ರ್ಯದ ಬಲದಿಂದಲೇ ಎಲ್ಲ ಅರ್ಹ ಸ್ಥಾನಗಳನ್ನೂ ಅವರು ತುಂಬಿದರು. ಯಾವ ಹುದ್ದೆಗೂ ಅವರು ಚ್ಯುತಿ ತರಲಿಲ್ಲ. ಅವರದು ಉದ್ದಕ್ಕೂ ಮಹತ್ವದ ಪಾತ್ರವೇ. ಸಾಮಾಜಿಕ ನ್ಯಾಯವೆಂಬುದು ಅವರ ಪ್ರಮುಖ ಕಾಳಜಿಯಾಗಿತ್ತು.


1971ರಲ್ಲಿ ಭಾರತ-ಪಾಕ್ ಮಧ್ಯೆ ಯುದ್ಧ ನಡೆದಾಗ (ಬಾಂಗ್ಲಾ ಪ್ರತ್ಯೇಕ ರಾಷ್ಟ್ರವಾಗಿ ಉದಯವಾದದ್ದು ಈ ಯುದ್ಧದ ಫಲಶ್ರುತಿ) ರಾಂ ಕೇಂದ್ರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರೆಂಬುದು ಅನೇಕ ಸಂಗತಿಗಳನ್ನು ಧ್ವನಿಸುತ್ತದೆ. ಎರಡು ಅವಧಿಗೆ ರಾಂ ಕೇಂದ್ರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರೆಂಬುದು ಕೇವಲ ದಾಖಲೆಯ ಸಂಗತಿಯಲ್ಲ. ಭಾರತೀಯ ಕೃಷಿ ಆಧುನೀಕರಣಗೊಂಡದ್ದು ಮತ್ತು ಭಾರತದಲ್ಲಿ ಹಸಿರು ಕ್ರಾಂತಿಯಾದದ್ದು ರಾಂ ಅವರ ಈ ಅವಧಿಯಲ್ಲಿಯೇ. 1974ರಲ್ಲಿ ದೇಶ ಬರಗಾಲವನ್ನು ಎದುರಿಸಿದಾಗ ಆಹಾರದ ಬಿಕ್ಕಟ್ಟನ್ನು ನಿಭಾಯಿಸುವ ಹೊಣೆಯನ್ನು ಹೊತ್ತವರು ರಾಂ. ತಮ್ಮ ಖಾತೆಯ ಜೊತೆಗೆ ರಾಂ, ಆಹಾರ ಖಾತೆಯನ್ನು ಹೆಚ್ಚಿನ ಖಾತೆಯಾಗಿ ನಿಭಾಯಿಸಿದರು.


ನಿಷ್ಠ ಕಾಂಗ್ರೆಸ್ಸಿಗರಾಗಿದ್ದ ರಾಂ ತಮ್ಮ ಅನುಭವದ ವ್ಯಾಪ್ತಿ ಹೆಚ್ಚಿದಂತೆಲ್ಲ ತಮ್ಮ ಘನತೆಯನ್ನೂ ಎತ್ತರಿಸಿಕೊಂಡರು. ರಾಂ, ‘ಬಾಬು’ ಜಗಜೀವನ ರಾಂ ಆದರು. ‘ಬಾಬೂಜಿ’ ಎಂದು ಕರೆದು ಜನ ಗೌರವ, ಪ್ರೀತಿ ತೋರಿದರು. ಅವರು ಹಾಗೆಯೇ ಪ್ರಸಿದ್ಧರಾದರು.


ಇಂದಿರಾ ಗಾಂಧಿ ಅವರು 1975ರಲ್ಲಿ ದೇಶದಲ್ಲಿ ತುರ್ತುಸ್ಥಿತಿ ಘೋಷಿಸಿದಾಗ ಬಾಬೂಜಿ, ಪ್ರಧಾನಿಯಾಗಿದ್ದ ಇಂದಿರಾ ಅವರನ್ನು ಬೆಂಬಲಿಸಿದರು. ಇದು ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಒಂದು ರೀತಿಯ ಆಘಾತವನ್ನೇ ಉಂಟುಮಾಡಿತು. ಆದರೆ ಬಾಬೂಜಿ ರಾಜಕೀಯ ಮುತ್ಸದ್ದಿಯಂತೆಯೇ, ರಾಜಕೀಯವನ್ನು ಬಲ್ಲ, ಅದರೆಲ್ಲ ಒಳಸುಳಿಗಳನ್ನು ತಿಳಿದ ತಂತ್ರಗಾರ. 1977ರಲ್ಲಿ ಇಂದಿರಾ ತುತರ್ುಸ್ಥಿತಿಯನ್ನು ತೆಗೆದುಹಾಕಿ ಚುನಾವಣೆಯನ್ನು ಘೋಷಿಸಿದಾಗ ಬಾಬೂಜಿ ಕಾಂಗ್ರೆಸ್ಸನ್ನು ತೊರೆದರು. ಜೆಪಿಯ ಜೊತೆ ಕೈಜೋಡಿಸಿದರು. ಜನತಾ ಪಕ್ಷದ ಮೈತ್ರಿಕೂಟವನ್ನು ಸೇರಿಕೊಂಡರು. ಬಾಬೂಜಿ ಎಷ್ಟು ಪ್ರಭಾವಶಾಲಿಯಾದ ರಾಜಕಾರಣಿ ಎಂಬುದು ಆ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಮತ್ತೊಮ್ಮೆ ಖಚಿತವಾಯಿತು. ಉತ್ತರ ಭಾರತದಲ್ಲಿ ಜನತಾ ಪಕ್ಷದ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗಳಿಸಿಕೊಂಡಿತು. ಬಾಬೂಜಿ ಆಗ ರಚಿಸಿಕೊಂಡಿದ್ದ ಪಕ್ಷ- ಕಾಂಗ್ರೆಸ್ ಫಾರ್ ಡೆಮಾಕ್ರಸಿ.


ಈ ಸಂದರ್ಭ ಬಾಬೂಜಿಯವರ ಜೀವನದಲ್ಲಿ ಮಾತ್ರವಲ್ಲ, ಭಾರತದ ದಲಿತರೆಲ್ಲದ ಬದುಕಿನಲ್ಲಿ ಮಹತ್ವದ ಸಂದರ್ಭವಾಗಿತ್ತು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಸ್ಥಾನವಾಗಿರುವ ಪ್ರಧಾನಿ ಪಟ್ಟವನ್ನು ಬಾಬೂಜಿ ಪಡೆದುಕೊಳ್ಳಬೇಕಾಗಿತ್ತು. ಆ ಅರ್ಹತೆ ಅವರಿಗಿತ್ತು; ನ್ಯಾಯಬದ್ಧ ಹಕ್ಕುದಾರರೂ ಅವರೇ ಆಗಿದ್ದರು. ಆದರೆ ಹಲವಾರು ಕಾರಣಗಳಿಂದಾಗಿ ಬಾಬೂಜಿ ಪ್ರಧಾನಿಯಾಗಲಿಲ್ಲ; ಉಪ ಪ್ರಧಾನಿಯಾದರು.

ಬಾಬೂಜಿ ಪ್ರಧಾನಿಯಾಗಿದ್ದರೆ ನಮ್ಮ ಪ್ರಜಾಪ್ರಭುತ್ವ ದಲಿತರ ನೋವಿಗೆ ಇನ್ನಷ್ಟು ಮಿಡಿವ ಪ್ರಾಣಮಿತ್ರನಾಗುವುದು ಸಾಧ್ಯವಿತ್ತು. ಅಂಥ ಸುವರ್ಣಾವಕಾಶ ಭಾರತದ ಪ್ರಜಾಪ್ರಭುತ್ವಕ್ಕೆ ತಪ್ಪಿಹೋಯಿತು.

12345678
Previous
Next Post »
Thanks for your comment